ಕ್ಯಾಮಿಡೋರಿಯ

ಅರಿಕೇಸೀ (ಪಾಮೀ) ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯಜಾತಿ. ಈ ಜಾತಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರಭೇದಗಳಿವೆ. ಎಲ್ಲವೂ ನೆರಳಿನಲ್ಲಿ ಬೆಳೆಯುವ ಮೆದುವಾದ ಮತ್ತು ಸೂಕ್ಷ್ಮಪ್ರಕೃತಿಯ ಪೊದೆಗಳು; ಹಸಿರಾದ, ಮೆದುವಾದ ಮತ್ತು ಗೆಣ್ಣುಗಳಿರುವ ಒಂಟಿ ಇಲ್ಲವೆ ಗುಂಪಾಗಿರುವ ಕಾಂಡಗಳನ್ನೊಳಗೊಂಡಿವೆ. ಕಾಂಡದ ತುದಿಯಲ್ಲಿ ಗರಿರೂಪದ (ಪಿನೇಟ್) ಎಲೆಗಳು ಕಿರೀಟದ ರೀತಿಯಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲುಗಳು ಈ ಗರಿಗಳ ಕೇಂದ್ರಭಾಗದಿಂದ ಹೊರಬಂದಿರುತ್ತವೆ. ಕ್ಯಾಮಿಡೋರಿಯದ ವಿವಿಧ ಪ್ರಭೇದಗಳನ್ನು ಗುಂಪಾಗಿ ಬೆಳೆಯುವ ಮತ್ತು ಒಂಟಿಯಾಗಿ ಬೆಳೆಯುವ ಸಸ್ಯಗಳು ಎಂದು ಎರಡು ಬಗೆಗಳಾಗಿ ವಿಂಗಡಿಸಬಹುದು.

ಗುಂಪುಕಾಂಡವುಳ್ಳ ಪ್ರಭೇದಗಳಲ್ಲಿ ಮುಖ್ಯವಾದವು ಕ್ಯಾ.ಎರುಂಪೆನ್ಸ್, ಕ್ಯಾ.ಸೈಪ್ರಿಟ್ಜಿಯೈ, ಕ್ಯಾ.ಸ್ಟೊಲೋನಿಫೆರ ಮತ್ತು ಕ್ಯಾ. ಡೆಸ್‍ಮಿನಕಾಯ್ಡಸ್.  ಕ್ಯಾಮಿಡೋರಿಯ ಅರ್ಮೆನ್‍ಬರ್ಜಿಯಾನ ಮತ್ತು ಕ್ಯಾ. ಗ್ಲಾಯ್ಸಿಫೋಲಿಯ ಪ್ರಭೇದಗಳು ಒಂಟಿ ಕಾಂಡವುಳ್ಳವುಗಳಲ್ಲಿ ಮುಖ್ಯವಾದವು.   								 (ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ